31 July, 2025

ಭರವಸೆ...

ನೂರು ನೋವುಗಳ ನಡುವೆ 
ಆಸೆಯ ಚಿಗುರೊಂದು ಹುಟ್ಟಿ, 
ಮನಸು ನಗಲು ಹರುಷದಲಿ
ಬದುಕೇ ಬೃಂದಾವನ ಜಗದೊಳಗೆ...

ಕಾಣದಾ ನಾಳೆಗಳ ಕತ್ತಲೆಯಲಿ
ಕಾಲಿಡಲು ಬದುಕು ಅಳುಕುತಿರಲು,
ಕನಸೆಂಬ ಮಿಂಚು ಹುಳವೊಂದು ಓಡಾಡೆ
ನಾಳೆಗಳ ದಾರಿಯು ಬೆಳಗಬಹುದಿಲ್ಲಿ...

ಯಾರು ಬಲ್ಲರು ಇಲ್ಲಿ ನಾಳೆಗಳ ಆಳ
ಒಂದಷ್ಟು ಭರವಸೆಯಷ್ಟೇ ಬದುಕು,
ನಾನು ಇಲ್ಲ ಇಲ್ಲಿ ನೀನು ಅಲ್ಲಾ
ದಾರಿ ಸಾಗಿದಂತೆ ತಿಳಿವುದು ಸತ್ಯವಿಲ್ಲಿ...

ಸುರಿಸಬೇಕು ಒಂದಷ್ಟು ಕಣ್ಣೀರ ಇಲ್ಲಿ 
ಖುಷಿಗಾದರೂ ಇಲ್ಲ ನೋವಿಗಾದರೂ,
ಹರಿಸಬೇಕು ಒಂದಿಷ್ಟು ಹನಿಗಳ ಬೆವರಿನಲ್ಲಿ
ನಾಳೆಗಳು ನಮ್ಮದೇ ಎಂಬ ದೃಢತೆಯಲಿ...

19 July, 2025

ನಂಟೆಂಬ ಅಂಟು...

ಬದುಕೆಲ್ಲ ಇಲ್ಲಿ ಭರವಸೆಗಳ ಗಂಟು
ಓಡುವ ಕಾಲಕ್ಕೂ ಬೆಸೆದಿದೆ ನೂರು ನಂಟು,
ಭಾವಯಾನದ ಪ್ರತಿ ಹೆಜ್ಜೆಯು ಸೇರುತಾ 
ಮನಸಿಗೆ ನೂರು ಕನಸುಗಳ ನಂಟು...

ಬಂದು ಹೋಗೋ ನಡುವೆ ಇಲ್ಲಿ 
ನೂರು ಬಂಧಗಳ ನಂಟೆಂಬ ಅಂಟು,
ಮನಸಿಗೆ ಪ್ರೀತಿಯ ನಂಟು 
ದೇಹಕ್ಕೆ ಉಸಿರಿನ ಅಂಟು...

ದೇಹ ಆತ್ಮಗಳ ನಡುವಿನ ನಂಟು 
ಕಾಲವೇ ಬೆಸೆದಾ ಗಂಟು,
ಅಂಟಿಕೊಂಡಿರುವ ನಂಟು ಇದಲ್ಲ
ಎಲ್ಲವೂ ಸಮಯದ ಗುಟ್ಟು...

ಹುಟ್ಟಿಗೂ ಸಾವಿನ ನಂಟು 
ನಡುವೆ ಇಲ್ಲಿ ನೂರೆಂಟು ಗುಟ್ಟು,
ಉಸಿರಿಗೂ ಇಲ್ಲಿ ಭಾವಗಳ ನಂಟು
ಬದುಕು ತುಂಬಾ ನಂಟೆಂಬ ಅಂಟು...

30 June, 2025

ಓ ಬದುಕೇ...

ಮತ್ತಷ್ಟು ಹೊರೆಯ ಹೊರಿಸಬೇಡ ಬದುಕೇ 
ಪುಟ್ಟ ಹೃದಯ ಭಾರವಾದೀತು,
ಚಿಂತೆಗಳ ಭಾರವೇ ಸಾಕಷ್ಟಿರುವಾಗ
ನಿಂತರೂ ನಿಂತುಬಿಡಬಹುದು ಒಮ್ಮೆ...

ಕರಗುತಿವೆ ಕನಸುಗಳು ಕಣ್ಣಂಚಿನಲೇ
ಜಾರುತಿರುವ ಕಣ್ಣಹನಿಗಳ ಜೊತೆಗೆ,
ಮನಸು ಮೂಕವಾಗುತಿದೆ ಇಲ್ಲಿ 
ಭಾವನೆಗಳ ಬಂಧ ಕಳಚಿ...

ಇರಬೇಕು ಇರುವಂತೆ  ಮನಸೇ 
ಎಲ್ಲಾ ಮರೆತು ನೀನು ಕಲ್ಲಾದಂತೆ,
ಜವಾಬ್ದಾರಿಗಳ ಬೆಚ್ಚನೆಯ ಹೊದಿಕೆಯೊಳಗೆ
ತಣ್ಣನೆಯ ನಿದ್ರೆಯಿರದ ನಾಳೆಗಳಲೂ...

ನೂರು ನೆನಪುಗಳ ಜೊತೆಗೆ
ಹೆಜ್ಜೆ ಹಾಕಬೇಕಿದೆ ಇಲ್ಲಿ ಮನಸು,
ನೂರು ನೋವುಗಳ ದಾಟಿ 
ಸಾಗಬೇಕಿದೆ ಬದುಕು ಎಲ್ಲಾ ಮರೆತು...

22 June, 2025

ಅನಂತದೆಡೆಗೆ...

ಈ ಬದುಕು ಇಲ್ಲಿ ಸಣ್ಣದಂತೆ
ಬ್ರಹ್ಮಾಂಡದ ಅನಂತ ಯಾತ್ರೆಯಲಿ,
ಈ ದೇಹವೊಂದು ಬಟ್ಟೆಯಂತೆ
ಆತ್ಮದ ದೀರ್ಘ ಪ್ರಯಾಣಕೆ...

ಸಾವು ಇರದ  ದೇಹವಿಲ್ಲ
ನೋವು ಇರದ ಬದುಕು ಇಲ್ಲ,
ಆತ್ಮಕ್ಕೆ ಯಾವ ನಂಟು ಇಲ್ಲ 
ದೇಹ ಕೊರಡು ಬಿಟ್ಟು ಹೊರಡೋವಾಗ...

ವಿಧಿಯು ಬೆಸೆದ ಕಾಲದ ನಂಟು
ಆತ್ಮ ದೇಹದ ನಡುವಣ ಗಂಟು,
ಸಂಚರಿಸಿದೆ ಉಸಿರಾಡುತಾ ಜಗದಿ
ಕರ್ಮ ಬೆಸೆದ ಆಯಸ್ಸಿನ ಗುಟ್ಟು...

ಆತ್ಮದ ಅನಂತ ಯಾತ್ರೆಯಿಲ್ಲಿ  
ಬೇರೆ ಬೇರೆ ದೇಹಗಳ ಜೊತೆಗೆ,
ಕೊನೆಯೋ ಮೊದಲೋ ತಿಳಿಯದಿಲ್ಲಿ 
ಮನುಜನೆಂಬ ಜನ್ಮದೊಳಗೆ...

15 June, 2025

ವಿಧಾತ...

ಮನಸೆಂಬ ಖಾಲಿ ಹಾಳೆಯಲಿ
ಅಳಿಸಲಾಗದ ಕಲೆಯು ಮೂಡಿಹುದು,
ಬದುಕೆಂಬ ಕಥೆಯಲ್ಲಿ ನೋವೇ ತುಂಬಿಹುದು
ಜೀವ ಒದ್ದಾಡಿದೆ ಭಗವಂತ ಕಾಲದ ಏಟಿಗೆ...

ಹುಟ್ಟಿಲ್ಲಿ ಉಚಿತ ಲೋಕದ ಸೃಷ್ಟಿಯಲಿ
ಸಾವೆಂಬುದು ನಿತ್ಯ ಸತ್ಯವೆಂದಿಗೂ,
ಬಂದ ಮೇಲೆ ಹೊರಡಲೇಬೇಕು
ಬಂಧ ಕಳಚಿ ಬಿಟ್ಟು ಹೋಗಲೇಬೇಕಿಲ್ಲಿ...

ಮೂರುದಿನದ ಯಾತ್ರೆಯಲಿ 
ನೂರು ನೂರು ಕನಸುಗಳು,
ಭಗವಂತ ನಿನಗೆ ಕರುಣೆ ಇಲ್ಲವೇ
ಕೆಲಸ ಮುಗಿಸೋಕೆ ಸಮಯ ನೀಡಬಾರದೇ...

ಅಳುವಿನ ಹಿಂದೆ ನಗುವ ಬಚ್ಚಿಟ್ಟೆ
ನಗುವ ಮುಂಚೆಯೇ ಕಣ್ಣ ಮುಚ್ಚಿಬಿಟ್ಟೆ,
ವಿಧಿಯೆಂಬ ಮಹರಾಯ ನಿನ್ನ ಆಟಕೆ
ನಿಯಮಗಳ ಸ್ವಲ್ಪ ಹೇಳಬಾರದೇ...

24 May, 2025

ಕಾಲಯಾನ...

ಇನ್ನಷ್ಟು ನೋವುಗಳ ಕೊಡಬೇಡ ವಿಧಿಯೇ
ಬದುಕು ಸವೆದಿದೆ ಈಗಾಗಲೇ,
ಮನಸು ಭಾರವಾಗಿ ದಿನಗಳೇ ಕಳೆದಿವೆ
ದೇಹವೂ ಹೊರಲಾರದು ಅಧಿಕ ಹೊರೆಯ...

ಮನಸು ಬಾಡಿದ ಹೂವು ಈಗ 
ದೇಹಕ್ಕೂ ಬೇಕೇನಿಸಿದೆ ಸ್ವಲ್ಪ ಆರಾಮ,
ಜವಾಬ್ದಾರಿಗಳು ಮುಗಿದಿಲ್ಲ ಇನ್ನು 
ಮನಸೇ ತಾಳಿಕೊಳ್ಳಬೇಕು ಎಲ್ಲವ ನೀನು...

ವಿರಮಿಸಲು ಕಾಲವಲ್ಲವಿದು ಬದುಕೇ
ಮುಂದಡಿಯಿಡಲು ಕಾಯಬಾರದು ನೀನು,
ಜವಾಬ್ದಾರಿಗಳೇ ಹಾಗೆ ಎಂದೂ ಮುಗಿಯುದಿಲ್ಲ
ಸಾಗಲೇಬೇಕು ಎಲ್ಲವನ್ನು ಮರೆತು ಕರೆ ಬರೋವರೆಗೆ...

ವಿಧಿಯೇ ದೂಷಿಸಲಾರೆ ನಾನು ಎಂದೂ ನಿನ್ನ 
ನಾಳೆಗಳ ತುಂಬಾ ಕನಸುಗಳ ತುಂಬಿಕೊಂಡಿರುವೆ,
ಬದುಕು ಹರಿಯುವ ನೀರು ಕರಗಿಸಬೇಡ ಮನಸ 
ತೊರೆಯಲೇಬೇಕು ಸಾಗುತ ನಿನ್ನೆಗಳ ನೋವ...

30 April, 2025

ಮಾಯಾಕನ್ನಡಿ...

ಮನಸೆಂಬ ಕನ್ನಡಿಯೊಳು
ಬದುಕು ನಗಬಹುದೇ,
ಭಾವಗಳ ಅಲೆಯಲ್ಲಿ
ತನ್ನೆಲ್ಲಾ ಅಳುಕುಗಳ ದೂರ ಸರಿಸಿ...

ನೂರು ನೋವುಗಳ ಮರೆತು
ಬದುಕಿಲ್ಲಿ ನಗಲು,
ಮನಸು ನಿಲ್ಲುವುದೇ
ಹೊಸ ಕನಸ ಜೊತೆಗೆ...

ಭಾವದೆಲೆಯ ಮೇಲೆ
ಬದುಕಿಲ್ಲಿ ತೇಲುತಿರೆ,
ಮನಸಿನೊಳಗೆ ನೂರು ಪ್ರತಿಬಿಂಬ
ಒಡೆದ ಕನ್ನಡಿಯಲಿರುವಂತೆ...

ಯಾರು ತನ್ನವರೋ
ಯಾರು ಹಿತವರೋ ಇಲ್ಲಿ,
ಸಾಗಬೇಕು ಕನಸುಗಳ ಜೊತೆಗೆ
ಬದುಕು ಮಂದಾರವಾಗಿರಲು...

21 April, 2025

ನನ್ನೆದೆಯಾ ಹಾಡು...

ಬದುಕು ಅನ್ನೋದು ಪೂರ್ವದ
ಉದಯ ಸೂರ್ಯನಲ್ಲ,
ಭರವಸೆ ಅನ್ನೋದು ಇಲ್ಲಿ 
ಪಶ್ಚಿಮದ ಕಡಲೂ ಅಲ್ಲ...

ಕನಸು ಕಾಣುವ ಜೀವಕೆ
ಬದುಕುವುದೇ ಒಂದು ಸಂಭ್ರಮ,
ನಗುವ ಮನಸಿರೋ ಜೀವಕೆ
ಬದುಕು ಅನ್ನೋದು ಹಬ್ಬವೇ...

ಮರುಗಬೇಕು ಮರೆವಿನೊಳು
ಅರಳಬೇಕು ಲೋಕದೊಳಗೆ,
ಜೀಕಬೇಕು ಕಾಲದ ಉಯ್ಯಾಲೆಯಲಿ
ಎದೆಯ ತುಂಬಿದ ಭಾವದ ಜೊತೆಗೆ...

ಕರಗಬೇಕು ಬದುಕು ಪ್ರೀತಿಯಾಗಲು
ಕಾಯಬೇಕು ಮನಸು ಹದವಾಗಲೂ,
ಬದುಕು ಇಲ್ಲಿ ಕೇಳಿ ಪಡೆದ ವರವಲ್ಲ
ಕರ್ಮದ ಜೊತೆಗಿನ ಶಾಪವೂ ಅಲ್ಲ...

31 March, 2025

ಅರಮನೆ...

ಹಳೆಯ ಮನೆಯ ಕೆಡವಿ 
ಹೊಸತೊಂದು ಗೂಡನು ಮಾಡೇ,
ಹೆಮ್ಮೆಯಪಡುತಲಿರಳು ಮನದಿ
ಹಳೆಯ ನೆನಪುಗಳು ಬಿಕ್ಕಿದವಿಲ್ಲಿ...

ಹಳೆಯ ಗೋಡೆಗಳ ಒಡೆದು
ಒಡಲ ಬಂಧಗಳ ತೊಡೆದು,
ಹೊಸತನದ ಗರ್ವದಲಿ ಬೀಗುತಿರಲು
ಭಾವಗಳೇ ಖಾಲಿ ಖಾಲಿ ಮನಸಿನಂಗಳದಿ...

ಹೊಸತು ಎಲ್ಲವನು ಜೋಡಿಸಿ
ಹಳೆಯದೆಲ್ಲವನು ಮೂಲೆಗೆ ತಳ್ಳಿ,
ಹಳೆಯ ಚಿತ್ರಗಳಿಗೆಲ್ಲ ಗೆದ್ದಲು ಹಿಡಿಯೇ
ನೆನಪುಗಳ ಬೇರುಗಳು ಅಲುಗಾಡಿದಂತೆ...

ನಾನೆಂಬ ಭಾವದೊಳು ಇಲ್ಲಿ
ಹೊಸತನವ ಹುಡುಕಿ ಲೋಕದೊಳು,
ನೆನಪುಗಳ ಬೇರ ಕಿತ್ತುಹಾಕಿ
ಬದುಕು ಅಳುತಿಹುದು ಒಂಟಿಯಾಗಿ...

07 March, 2025

ಮಾಯಾವಿ...

ವಿಧಿಯೆಂಬ ಸಾಹೇಬ ನೀನೆಷ್ಟು ಒಗಟು 
ಅಳಲಾಗದೆ ನಗಲಾಗದೆ ಬದುಕಿಲ್ಲಿ ಬೆರಗು,
ಒಂದೊಮ್ಮೆ ಅನಿಸುವುದು ನೀನೆಷ್ಟು ಕ್ರೂರಿ 
ಮತ್ತೊಮ್ಮೆ ಅನಿಸುವುದು ನೀ ಪೂರ್ವದ ನಂಟೇ...

ಜಗವ ನಡೆಸುವ ನೀತಿ ನೀನಂತೆ ವಿಧಿಯೇ 
ಸೃಷ್ಟಿಯು ಹೊರತಲ್ಲವಂತೆ ನಿನ್ನ ಚೌಕಟ್ಟಿನಿಂದ,
ಇರಬಹುದೇ ನಿನ್ನನ್ನು ಮೀರಿದಾ ಬದುಕು 
ಗೆಲುವಿನಲು ಸೋಲಿನಲು ನಗುವಂತ ಮನಸು...

ಕಣ್ಣಿಗೆ ಕಂಡರೊಮ್ಮೆ  ಕೇಳುವುದಿತ್ತು ನಿನ್ನ ಬಳಿ 
ನಿನ್ನ ನಿಯಮದಲ್ಲಿ ಏನೇನಿದೆ ಹೇಳು,
ಮೊದಲೇ ಎಲ್ಲವನು ತಿಳಿಯುವ ಹಂಬಲವಲ್ಲ 
ಮನಸು ಹಗುರವಾಗುತ್ತಿತ್ತು ಸತ್ಯವನು ಅರಿತು...

ಯಾರು ಕಂಡರೋ ನಿನ್ನ ಎಂದೋ ಜಗದಿ 
ವಿಧಿಯೆಂಬ ಹೆಸರ ನಿನಗಿತ್ತವರು ಯಾರೋ,
ಭಯಪಡಬೇಕೋ ನೀ ಮಾಯವಿಯೆಂದು 
ನಗಬೇಕೋ ಹೇಳು ನೀನ್ಯಾರೆಂದು ತಿಳಿಯದೇ...

27 February, 2025

ಹಾರುತ ದೂರ...

ಅಳಿದುಳಿದ ಭಾವಗಳು ಸೇರಿ 
ಮನಸು ತುಂಬಿದಂತೆ,
ಕರಗಿಹೋದ ಕನಸುಗಳೆಲ್ಲ ಮರಳಲು 
ಬದುಕೆಲ್ಲಾ ಬೆಳದಿಂಗಳು...

ಪ್ರೀತಿ ಜೊತೆ ಜೀಕುವ ಮನಸಿಗೆ 
ನೆನಪುಗಳೇ ಮಂದಾರವೂ,
ಒಲವ ಲೋಕದೋಳು ಪಯಣಕೆ 
ಮನಸಿಲ್ಲಿ ಶೃಂಗಾರವೂ...

ಗೂಡ ಕಟ್ಟುವ ಬಯಕೆ 
ಮನಸ ಮೂಲೆಯಲೊಮ್ಮೆ,
ರೆಕ್ಕೆ ಬಡಿಯುತ ಬೆಳೆಯಲಲ್ಲಿ 
ಬದುಕಲಿ ಭಾವದ ಹಕ್ಕಿ ...

ಬದುಕಿಲ್ಲಿ ಮೂರು ದಿನ 
ನೂರು ನೋವುಗಳ ನಡುವೆ,
ಸಂಭ್ರಮಿಸಬೇಕಿಲ್ಲಿ ಇರುವಷ್ಟು ಹೊತ್ತು 
ಬದುಕ ಬಾನಿನಲಿ ರೆಕ್ಕೆ ಬಿಚ್ಚಿ...

15 February, 2025

ಸೂತ್ರ...

ಬೆಳಗೋ ದೀಪವೂ ಇಲ್ಲಿ 
ಅದು ಪ್ರೀತಿ ತಾನೇ ಬದುಕಲಿ,
ಉಸಿರಾಡೋ ಗಾಳಿಯಂತೆ
ನಂಬಿಕೆಯು ಈ ಬದುಕಿಗೆ...

ಪ್ರೀತಿ ಇರದ ಬಾಳು ಉಂಟೇ 
ಜಗದ ಈ ಅಂಗಳದಲಿ,
ನಂಬಿಕೆಯಿರದ ಸಂಬಂಧವಿದೆಯೇ 
ಲೋಕದಾ ಈ ಯಾತ್ರೆಯಲಿ...

ಪ್ರೀತಿಯಿಲ್ಲಿ ಸೂತ್ರದಂತೆ 
ನಂಬಿಕೆಯು ನೀತಿಯಂತೆ,
ನೀತಿಯಿರದ ಸೂತ್ರವೆಲ್ಲಿ 
ಸೂತ್ರವಿರದೆ ನೀತಿಯಿಲ್ಲ...

ಒಂದು ಹುಟ್ಟು ಒಂದು ಸಾವು 
ನಡುವೆ ಉಂಟು ನೂರು ಗೋಳು,
ಬಂಧ ಕಟ್ಟಿ ಬಂಧ ಕಳೆವ 
ನಡುವೆಯಿಲ್ಲಿ ಬದುಕು ನೋಡು...

31 January, 2025

ಮೆರವಣಿಗೆ...

ಈ ಬದುಕಿನ ಪಯಣದ ತುಂಬೆಲ್ಲಾ 
ನೂರಾರು ತಿರುವು ಇದೆಯಲ್ಲಾ,
ನಗುನಗುತಾ ಸಾಗುತ ಇರುವಾಗ 
ನಿಲ್ದಾಣವೇ ಮರೆತಂತಿದೆಯಲ್ಲಾ...

ಹೊಸತೊಂದು ಲೋಕವೇ ತೆರೆದಂತೆ 
ಬದುಕು ಅಚ್ಚರಿಯ ಕಂಡಂತೆ,
ಆಸೆಗಳ ಜೊತೆಗಿನ ಈ ಪಯಣ 
ಸಾಗುವ ದಾರಿಯ ಮರೆಸಿದೆಯಲ್ಲ...

ಮನಸಿನ ಹಾಳೆಗಳ ತುಂಬೆಲ್ಲಾ 
ಭಾವಗಳ ಚಿತ್ತಾರ ಬರೆದಂತೆ,
ಕನಸುಗಳ ಹೊತ್ತ ಕಂಗಳಿಗೂ 
ಬದುಕು ತೋರಣ ಕಟ್ಟಿದೆಯಲ್ಲ...

ಕಾಲವು ಮಗ್ಗುಲು ಬದಲಿಸಿದಂತೆಲ್ಲ 
ಹೊಸತೊಂದು ಪರೀಕ್ಷೆಯು ಇದೆಯಲ್ಲ,
ಹೊಸತಾದ ನಿರೀಕ್ಷೆಯ ಜೊತೆಯಿಲ್ಲಿ 
ನಗುವಿನ ಮೆರವಣಿಗೆ ನಡೆದಿದೆಯಲ್ಲ...

20 January, 2025

ಹೊಸ ಚಿಗುರು...

ಅದೇ ಸೂರ್ಯ ಅವನು ಹೊಸಬನಲ್ಲ 
ನಿನ್ನೆಯ ನಾನು ಮತ್ತೆ ಇಲ್ಲಿ,
ಹೊಸತೊಂದು ದಿನವಷ್ಟೇ ನನಗೆ 
ನನ್ನೊಳಗೆ ಹೊಸತನವ ಚಿಗುರಿಸಲು...

ಕನಸೊಂದು ಹೊಸತಾಗಿರೆ ಇಲ್ಲಿ 
ಪ್ರೀತಿಸುವ ಮನಸಿಗೆ,
ನಿನ್ನೆಯ ನಗುವು ಇಲ್ಲಿ 
ಹೊಸತಾಗಬಹುದೇ ನಾಳೆಗೆ...

ನನ್ನೊಲವ ನಲಿವಿಗೆ ಈಗ 
ನಿನ್ನೆಗಳ ಕರ್ಮ ಕಾಡಬಹುದೇ ಇಲ್ಲಿ,
ಹೊಸತುಗಳ ಹುಡುಕಿದರೇನು 
ಹಳೆತುಗಳು ಬೆನ್ನು ಬಿಡಬಹುದೇ...

ಹಳೆಯ ಹಾಡು ಹೊಸತೊಂದು ಪಾಡು 
ಈ ಲೋಕದಾ ಪಯಣದಲಿ,
ನಿನ್ನೆ ಪ್ರೀತಿಸಿದಷ್ಟೇ ಇಂದು ಪ್ರೀತಿಸುವೆ ಬದುಕೇ 
ರೀತಿ ಬದಲಾದರೂ ಆಗಬಹುದಿಲ್ಲಿ ಅಷ್ಟೇ....