ಅಭಿಮನ್ಯು ನೀನಾಗಬೇಕು ಹುಡುಗ ಈ ಧರ್ಮ ಯುದ್ದದಲಿ,
ಧರ್ಮವೇ ನಿನ್ನ ರಥವಾಗಬೇಕು,
ಸತ್ಯವೇ ನಿನ್ನ ಸಾರಥಿಯು,
ನ್ಯಾಯನೀತಿಗಳೇ ನಿನ್ನ ರಥದ ಅಶ್ವಗಳಾಗಲಿ.
ಅನ್ಯಾಯ ಅನೀತಿಗಳ ಚಕ್ರವ್ಯೂಹವ ನೀನು ಭೇದಿಸಲೇಬೇಕು,
ಗೆದ್ದರೆ ವಿಜಯ ಸೋತರೆ ಸ್ವರ್ಗ ನಿನಗಲ್ಲವೋ ಗೆಳೆಯಾ,
ಕೃಷ್ಣನ ಚತುರತೆಯ ಬಲ ನಿನಗಿಲ್ಲ ನಿನಗೆ ನೀನೇಕೃಷ್ಣನೂ,
ಶಕುನಿಗಳ ನೂರು ತಂತ್ರವಿಹುದಿಲ್ಲಿ ಕುಗ್ಗದಿರು ನೀನೆಂದೂ,
ಕರ್ಣ ದ್ರೋಣರ ಪರಾಕ್ರಮವೂ ನಿನ್ನ ಮನೋಬಲಕ್ಕಿಂತ ಮಿಗಿಲಲ್ಲವೋ ಹುಡುಗ.
ಪ್ರೀತಿ ಪ್ರೇಮಗಳೇ ನಿನ್ನಾಸ್ತ್ರವಾಗಲಿ,
ಛಲವೇ ನಿನಗೆ ಬ್ರಹ್ಮಾಸ್ತ್ರವೂ,
ಬಿಡದೆ ಹೂಡಲೇಬೇಕು ನಿನ್ನ ತಂತ್ರಗಳ,
ನಿನ್ನ ಕೋಪತಾಪಗಳೇ ನಿನಗೆ ದಿವ್ಯಾಸ್ತ್ರವೂ.
ಮರುಗದಿರು ನೀನೆಂದೂ ಈ ಧರ್ಮಯುದ್ದದಲಿ,
ನೂರಾರು ಅಡೆತಡೆಗಳಿಹುದು ಈ ಚಕ್ರವ್ಯೂಹದಲಿ,
ಸೋಲೆಂದು ನಿನಗಿಲ್ಲ ಅದು ನಿನ್ನದೂ ಅಲ್ಲ,
ಛಲವ ಬಿಡದಿರು ನೀನು ನೋವೆಷ್ಟೇ ಬಂದರೂ.
ಮೋಸ ವಂಚನೆಯ ಕಪಟ ನಾಟಕಕೆ ಅಂತ್ಯ ಹಾಡಲೇಬೇಕು ನೀನಿಂದು,
ಸತ್ಯಾದ ವಿಜಯ ಸನಿಹವಿಹುದಿಂದು,
ಹಿಂತಿರುಗಿ ನೋಡದಿರು ಗೆಲುವೆಂದೂ ಮುಂದಿಹುದು ನೋಡು,
ಮನೋಬಲವಿಹುದುನಿನಗೆ ಅದೇ ನಿನ್ನಾಸ್ತಿಯು,
ಮೊಳಗಿಸು ವಿಜಯ ದುಂಧುಭಿ ಈ ಧರ್ಮಯುದ್ದದಲಿ....
No comments:
Post a Comment