18 July, 2012

ಕಲ್ಲರಳಿ.....



ಪ್ರೀತಿಯರಮನೆಗಿಂದು ನೀರವ ಮೌನವಾವರಿಸಿದೆ,
ನಿನ್ನ ಕಿಲಕಿಲ ನಗುವಿನ ಸದ್ದಿಲ್ಲ ಅಲ್ಲಿ,
ಕೈಯ ಬಳೆಯ ನಾದವೂ ಇಲ್ಲ,
ಕಾಲ್ಗೆಜ್ಜೆಯ ದನಿಯಂತೂ ಮರೆತೇ ಹೋಗಿದೆ,
ಉಸಿರುಗಟ್ಟಿಸುತಿದೆ ಈ ಕರಾಳ ಮೌನ,
ನೀನೊಮ್ಮೆ ಬಂದು ಈ ನೋವ ಮರೆಸಬೇಕಿದೆ.
ಈ ಹೃದಯದರಮನೆ ನಿನ್ನದು ಅಲ್ಲಿ ಪ್ರೀತಿ ಹರಿಸಬಾರದೇ?
ಕಲ್ಲು ಹೃದಯ ನನ್ನದಲ್ಲವೇ ಗೆಳತಿ,ನನಗೂ ಪ್ರೀತಿಯ ಅರಿವಿದೆ,
ಮರುಮಾತಾಡದೇನೆ ಹೊರಟೇಬಿಟ್ಟೆಯಲ್ಲೆ ಈ ಮನಸಿನರಮನೆಯಿಂದ?
ಒರಟ ನಾನು ನಿಜ ಆದರೆ ಸ್ವಾರ್ಥಿ ನಾನಲ್ಲ,
ಪ್ರೀತಿಸೋಕೆ ಹೇಳಿಕೊಟ್ಟೆ ,ಕಲ್ಲು ಕರಗಿ ನೀರಾಗಿದೆ ನೋಡು,
ಜೀವನದ ಹೂದೋಟದಲ್ಲಿ ನೀನೇ ಬೆಳೆಸಿದ ಬಳ್ಳಿ ಹೂವ ಬಿಟ್ಟಿದೆ ನೋಡು,
ನಿನ್ನ ಸ್ಪರ್ಶಕೆ ಕಾದಿಹುದು ನೀ ಬಂದು ಮುಡಿಯಬಾರದೇ?
ಈ ಪ್ರೀತಿಗೆ ಧನ್ಯತೆಯ ನೀಡಬಾರದೇ?
ಕಲ್ಲರಳಿ ಹೂವಾಗಿದೆ,ಮನಸ್ಸಿಂದು ಮಗುವಾಗಿದೆ,
ನಿನ್ನ ಪ್ರೀತಿಗೆ ಕಾತರಿಸಿದೆ,ನೀ ಬಂದು ಸೇರಬಾರದೆ,
ಈ ವಿರಹ ತಣಿಸಿ ಪ್ರೀತಿಯರಮನೆಯ ಬೆಳಗಬೇಕಿದೆ...

No comments:

Post a Comment