19 July, 2012

ಎದ್ದೇಳು ಓ ಮನಸೇ....


ಭ್ರಮೆಯ ಬದುಕು ನಿನಗಲ್ಲ,
ನೋವು ನಲಿವುಗಳ ಸಮ್ಮಿಲನವೀ ಬದುಕು,
ಪರಿತಪಿಸದಿರು ಕಳೆದು ಹೋದುದ ನೆನೆದು,
ಭರವಸೆಯ ನಾಳೆಯಲಿದೆ ನಿನ್ನಾ ಬದುಕು.

ಕೊರಗಿ ಮರುಗದಿರು ಗೆಳೆಯಾ,
ನಾಳೆಯ ಜೀವನಕೆ ನೀನಣಿಯಾಗು,
ಜೀವನವಿದು ಹೂವಿನ ಹಾಸಿಗೆಯಲ್ಲ,
ಕಲ್ಲಿಹುದು,ಮುಳ್ಳಿಹುದು ನೂರಾರು ಕಪಟವಿಹುದಿಲ್ಲಿ.

ಎದ್ದೇಳು ಹುಡುಗ ಈ ಮೌನ ತರವಲ್ಲಾ,
ನಿನ್ನದಲ್ಲದ ತಪ್ಪಿಗೆ ಪರಿತಪಿಸುವೆಯೇಕೆ,
ಜೀವನವಿದು ನಿನ್ನದೇ ಅಣಿಯಾಗು ನಾಳೆಗೆ,
ಸುಂದರ ಕನಸುಗಳ ಸಾಕಾರಗೊಳಿಸಲು.

ನಿನ್ನ ಸಹನೆಗಿದು ಪರೀಕ್ಷೆಯೂ,
ತಾಳ್ಮೆಗೆಡದಿರು ನೀನು ಈ ಬಾಳ ಪಯಣದಿ,
ಒಲವಿದು ನಿನ್ನದಾಗಲಿ,
ಛಲವಿಹುದು ನಿನ್ನಲಿ.

ಜೀವನವಿದು ಯಾತನೆಯಲ್ಲ,
ಹಾಸಿ ಹೊದ್ದುಕೊಳ್ಳುವ ರತ್ನಗಂಬಳಿಯೂ ಅಲ್ಲ,
ಮೂಕವೇದನೆ ನಿನಗೇತಕೋ ನಿನ್ನೆಯನು ನೆನೆಯುತಲಿ,
ಜಾರಿ ಹೋದ ಕಣ್ಣೀರಿಗಿಲ್ಲಿ ಬೆಳೆಯಿಲ್ಲವೋ ಹುಡುಗ.

ಎದ್ದೇಳು ಓ ಮನಸೇ ನೀನಿಂದು,
ನಿನ್ನೆಗಳ ಯಾತನೆಯ ಕಸವ ಗುಡಿಸಿ,
ನಾಳೆಗಳ ಕನಸನ್ನ ಮರು ಪೋಣಿಸಿ,
ಜೀವನವೆಂದೂ ನಿನ್ನದೇ ನಾಳೆಗಳ ನಾಳೆಯದು ಸರಿಯುತ್ತಲ್ಲಿದ್ದರೂ...


No comments:

Post a Comment