ಪದಗಳಿಗೆ ನಿಲುಕದ ಚೆಲುವೆಯಿವಳು,
ಪ್ರೀತಿಯಲಿ ತುಂಬು ಸಾಗರವೂ...
ನಗುವಿನಲಿ ಮರೆಸುವಳು ನೋವಭಾವವನೆಲ್ಲ,
ಕೊಂಕು,ಬಿಂಕವ ಬಿಟ್ಟ ಸರಳ ನೀರೆಯಿವಳು.
ಹುಡುಗಾಟದ ಹುಡುಗಿ ಬಾಳ ಸ್ನೇಹಿತೆಯಿವಳು,
ಮರುಕ್ಷಣವೇ ಪ್ರೇಮರಸಧಾರೆಯೆರೆವ ಪ್ರೇಯಸಿಯು.
ನಕ್ಕರೆ ನಾನು ಮನ ತುಂಬಿಕೊಳ್ಳುವಳು,
ಮೌನಿಯಾದರೆ ನಾನು ಕಣ್ತುಂಬಿಕೊಳ್ಳುವಳು.
ಅವಳ ಪ್ರೀತಿಯ ಮಡಿಲಲ್ಲಿ ಮಗುವು ನಾನು,
ನನ್ನ ನಗುವಲ್ಲೆ ಸುಖವ ಕಾಣುವಳವಳು.
ಅರೆಕ್ಷಣ ಮರೆಯಾದರೂ ಬೆದರಿದ ಹರಿಣಿಯಿವಳು,
ನಾ ಜೊತೆಯಾದರೆ ಪ್ರೇಮದೇವತೆಯಿವಳು.
ರೂಪರಾಶಿಯ ಹೊತ್ತ ಸಿಗ್ಧ ಚೆಲುವೆಯಿವಳು,
ಪ್ರೀತಿ ಸಾಗರವ ಹರಿಸೋ ಅಮೃತಧಾರೆಯಿವಳು.
ನನ್ನ ಬದುಕಿನ ಕಣ್ಣಾಗಿ ಜೊತೆಯಲೇ ಹೆಜ್ಜೆಯಿಡುವವಳು,
ನನ್ನ ಬಾಳಿನ ಭಾಗ್ಯಜ್ಯೋತಿಯಿವಳು...
No comments:
Post a Comment