ಮನಸಂದು ಗಿರಕಿ ಹೊಡೆಯುತ್ತಲಿತ್ತು ಸ್ನೇಹ-ಪ್ರೀತಿಯ ಗುಂಗಿನಲಿ,
ಮೊದಲ ನೋಟದಲ್ಲೇ ಒಲವ ತುಂಬಿತ್ತು ಮನಸು ನಿನ್ನ ನೋಡಿಯಂದು,
ಒಲವ ಬಳ್ಳಿಯದು ಚಿಗುರೋ ಮುಂಚೇನೆ ಬಿದ್ದಿತ್ತು ಕಾಲದ ಚಡಿಯೇಟು,
ಒಲವ ಲತೆಯಲ್ಲಿ ಸ್ನೇಹದ ಮೊಗ್ಗು ಹೂವಾಗಿ ಅರಳಿತ್ತು.
ಇಷ್ಟವದು ಮನ ತುಂಬಿತ್ತು ಸ್ನೇಹರಾಗವಾಗಿ,
ಬೆರೆತೆವು ಸ್ನೇಹಿತರಾಗಿ ಮನಸಿನಂಗಳದಿ,
ನೊಡೋರ ಕಣ್ಣಿಗದು ಪ್ರೀತಿಯಾಯ್ತು,
ಎರಡು ಹೃದಯಗಳಿಗಷ್ಟೇತಿಳಿದಿತ್ತು ಅದು ಬರೀಯ ಸ್ನೇಹವೆಂದು.
ಮೌನವದು ಬೇಸರವ ತರಿಸುತಿತ್ತು ಮನಸುಗಳ ನಡುವೆ,
ಸರಸವೇ ತುಂಬಿತ್ತು ಸ್ನೇಹದ ಒಡನಾಟದಲಿ,
ಜಗಳವಾಡದ ಕ್ಷಣಗಳಿಲ್ಲ,ಮುನಿಸು ತಾರದ ಮಾತುಗಳಿಲ್ಲ,
ಆದರೂ ತುಂಬಿತ್ತು ಒಲವದು ಸ್ನೇಹ ಜ್ಯೋತಿಯಾಗಿ.
ನೆನಪಿದೆಯಾ ಗೆಳತಿ ನಿನಗೆ ರೇಗಿಸಿದರೆ ಮಾತು ಮುರಿಯುತ್ತಿದ್ದೆ ನೀನಂದು,
ನಕ್ಕು ಸುಮ್ಮನಾಗಿದ್ದೆ ನೀನೇಷ್ಟೇ ಸತಾಯಿಸಿದರೂ ನಾನಂದು,
ದಿನಗಳುರುಳಿ ವರುಷಗಳೇ ಕಳೆದರೂ ಈ ಸ್ನೇಹವಿದು ಮುಪ್ಪಾಗಲಿಲ್ಲ,
ಕಾಲವದು ದೂರಾಗಿಸಿದರೂ ಮನಸೇಕೊ ಕೊರಗಲಿಲ್ಲ.
ಸ್ನೇಹದಾ ಶರಧಿಯಲಿ ಸಾಗಿತ್ತು ಪಯಣ ಎಂದಿನಂತೆ,
ಬಿರುಗಾಳಿಯದು ಸುಳಿಯಲೇ ಇಲ್ಲ ನಮ್ಮ ಹಾದಿಯಲೆಂದು,
ನೂರು ಕಾಲಕೂ ಇಹುದು ಈ ಸ್ನೇಹದಾ ಬಂಧ ನನ್ನ ನಿನ್ನೊಳಗೆ,
ಬಾಳ ದಾರಿಯದು ಮುಗಿದು ಹೋದರೂ ಸ್ನೇಹಿತನಾಗೆ ಉಳಿದಿರುವೆ ನಾನು ನಿನಗೆಂದೂ...
No comments:
Post a Comment