ಎಲ್ಲರ ಹಾಗೆ ನಾನ್ಯಾಕೆ ಮುದ್ದಾಗಿ ಬೆಳೆಯಲಿಲ್ಲ,
ಎಲ್ಲೇ ಹೋದರೂ ನಾನ್ಯಾಕೆ ಶೋಷಿತನಾದೆ,
ಹೆತ್ತವಳು ಯಾರೋ ತಿಳಿಯದೆ ಸಲಹಿದವರಿಂದಲೇ ಗುರುತಿಸಿಕೊಂಡೆ ಅದೂ ಸೂತಪುತ್ರನೆಂದೇ...
ಯಾರಿಗೂ ಇಲ್ಲದ ತೇಜಸ್ಸು ನನಗ್ಯಾಕೆ ಬಂತು ಕಾಡಿತ್ತು ನನಗೆ ಸಂಶಯವಾಗಿ,
ಸಾಮಾನ್ಯ ಬೆಸ್ತರ ಹುಡುಗ ನನಗೇಕೆ ಕಾಡಿತ್ತು ಶಸ್ತ್ರ ವ್ಯಾಮೋಹ,
ಯುದ್ಧಾಭ್ಯಾಸ ಕಲಿಯುವ ಮನಸೇಕೆ ನನಗಾಯ್ತು...
ದ್ರೋಣರ ಕ್ಷತ್ರೀಯ ಪರ ನಿಲುವಿಗೆ ಧಿಕ್ಕಾರ ಹೇಳಿ ಹುಡುಕಿದ್ದೆ ಮಹಾಗುರು ಪರಶುರಾಮರ,
ಬ್ರಾಹ್ಮಣ ಕುವರನೆಂಬ ಸುಳ್ಳೇ ನನಗೆ ಮುಳುವಾಯ್ತೇ,
ನನಗೇನು ತಿಳಿದಿತ್ತು ಕ್ಷತ್ರೀಯ ರಕ್ತ ನನ್ನಲ್ಲಿದೆಯೆಂದು,
ನನಗೆ ತಿಳಿದಿದ್ದು ಇಷ್ಟೇ ನಾ ಸೂತಪುತ್ರ ರಾಧೇಯನೆಂಬುದು...
ಕಲಿತ ವಿದ್ಯೆಯು ಆಪತ್ಕಾಲಕ್ಕೆ ನೆರವಾಗದಿರಲೆಂಬ ಶಾಪದೊಂದಿಗೆ ಕೊನೆಯಾಗಿತ್ತು ನನ್ನ ಶಸ್ತ್ರ ವಿದ್ಯೆ,
ಮರಳಿದ್ದೆ ಮತ್ತೆ ವೀರ ಕರ್ಣನಾಗಿ ಕಹಿ ನೆನಪ ಹೊತ್ತು,
ಆ ಸೂರ್ಯದೇವನು ಕರಗಿರಬೇಕು ನನ್ನೊಡನೆ ವಿಧಿಯಾಡಿದ ಮೋಸದಾಟಕೆ...
ಅರ್ಜುನನ ಪೌರುಷಕೆ ಸಮನಾರು ಇಲ್ಲದ ಕುರುರಾಜ್ಯಕ್ಕೆ ಮರಳಿದ್ದೆ ಅಲ್ಲೂ ಸೂತಪುತ್ರನೆಂಬ ಅವಮಾನ,
ಅಪ್ರತಿಮ ವೀರನ ಗೆಳೆಯನಾಗಿ ಪಡೆದ ಖುಷಿ ಕೌರವಗೆ,
ಅಂಗ ರಾಜ್ಯಕೆ ದೊರೆಯಾಗಿಸಿ ಮರೆಸಿಬಿಟ್ಟ ಸೂತಪುತ್ರ ನೆಂಬ ಅವಮಾನದ ಗಾಯವ...
ಪ್ರಾಣಕ್ಕೆ ಪ್ರಾಣ ನೀಡುವ ಸ್ನೇಹ ನಮ್ಮದಾಗೋಯ್ತು,
ಪಾಂಡವರ ಅಪಮಾನ,ದ್ರೌಪದಿಯ ವಸ್ತ್ರಾಪಹರಣ ನೋಡಿಯೂ ಏನೂ ಹೇಳಲಾಗದ ಅಸಹಾಯಕನಾದೆ,
ಪಾಂಡವರ ಮೇಲೆ ಕೋಪವಿರಲಿಲ್ಲ ಆದರೆ ಅಹಂಕಾರಿ ಅರ್ಜುನನ ಸೊಕ್ಕು ಅಡಗಿಸಬೇಕಿತ್ತು...
ಕಣ್ ಮುಚ್ಚಿ ತೆರೆಯೋದರೊಳಗಾಗಿ ಏನೇನೋ ನಡೆದು ಹೋಗಿತ್ತು,ಕುರುಕ್ಷೇತ್ರ ಕಣ್ಣಮುಂದಿತ್ತು,
ಆಗ ಬಂದಿದ್ದ ಕೃಷ್ಣ ನೀನು ಪಾಂಡವರಗ್ರಜ ಕುಂತೀಪುತ್ರನೆನುತ,
ನೀನು ಬಂದಿದ್ದೆಯಲ್ಲಮ್ಮ ನಿನ್ನ ಪಾಂಡುಪುತ್ರರ ಉಳಿಸಿಕೊಳ್ಳೊದಕ್ಕೆ,ನನ್ನ ಮೇಲಿನ ಪ್ರೀತಿಯಿತ್ತೇ ಅಲ್ಲಿ?
ಕುಂತೀಪುತ್ರನೆಂಬ ಸತ್ಯದ ಅರಿವಾಗಿತ್ತು ಆದರೆ ಸ್ನೇಹಕ್ಕೆ ದ್ರೋಹಗೈಯಲಾರೆನಮ್ಮ,
ಊರೇ ಸೂತಪುತ್ರನೆಂದರೂ ಕರ್ಣನ ಮಾನವ ಕಾಪಾಡಿದ ಕೌರವ,ಈ ದೇಹವೂ ಅವನಿಗೇನೇ...
ಎಲ್ಲಾ ಮುಗಿದು ಹೋಗಿದೆಯಿಂದು ಸತ್ತು ಶವವಾಗಿ ಮಲಗಿರುವೆ ನಾನು ನೋಡಮ್ಮ,
ಕಾಡುತಿದೆ ನನಗಿಂದು ಸುಭದ್ರೆಯ ಶಾಪ,ಉತ್ತರೆಯ ರೋಧನೆ,ಅಭಿಮನ್ಯುವ ಮೋಸದಿ ಕೊಂದ ಬಗೆ,
ಆದರೂ ನನಗೆ ತೃಪ್ತಿಯಿದೆ ಕೊನೆಗೂ ಹೇಳಿದೆ ನೀನು ಸತ್ಯವ ಈ ಲೋಕಕೆ,
ಜನ್ಮ ರಹಸ್ಯ ತಿಳಿದ ಖುಷಿಯಿದೆ ಜೊತೆಗೆ,
ಕೌರವನ ಸ್ನೇಹಕ್ಕೆ ಪ್ರಾಣವನಿತ್ತ ತೃಪ್ತಿಯಿದೆಯಿಂದು ಆದರೂ ನಾನು ಸೂತಪುತ್ರನೇ...
No comments:
Post a Comment