ತುಂಬು ಬಸುರಿ ಈಗ ಭೂರಮೆಯು ಈ ಮುಂಗಾರು ಮಳೆಗೆ,
ಹಚ್ಚಹಸುರನೇ ಹೊದ್ದು ಕಂಗೊಳಿಸುತಿಹಳು ನವ ಮಾಸ ತುಂಬಿದ ನೀರೆಯಂತೆ...
ಮೇಘರಾಜನಿಗೂ ಅವಳ ಮುತ್ತಿಕ್ಕುವ ಆಸೆ ಮಳೆ ಹನಿಯಾಗಿ ಸುರಿದು,
ಜೊತೆಯಾಗೊ ಹಂಬಲ ಪುಷ್ಪಸಿಂಚನದಂತೆ ಆಗಾಗ ಸುರಿದು...
ನೇಸರನಿಗೂ ದಿಗಿಲು ಭೂರಮೆಯ ಈ ಪರಿಯ ಕಂಡು,
ಬೆಳಗಲಾರದೆ ಬೆಳಗುತಿರುವ ಕಾಂತಿಯ ಕಳೆದುಕೊಂಡು...
ಚಾಮರವ ಬೀಸುತಿಹನು ವರುಣದೇವನು ಜೊತೆಯಾಗಿ,
ಧರಣಿಯ ಸೊಬಗಿಗೆ ನಾಚುತ್ತಾ ತನ್ನನ್ನೇ ಮರೆತವನಂತೆ...
ಹಕ್ಕಿಗಳ ಕಲರವದ ಸರಿಗಮ ಸಂಗೀತವೂ ಜೊತೆಯಾಗಿದೆ,
ಮೈಮರೆಸಿದೆ ಸೋಬಾನೆಯಾಗಿ ಬಸುರಿ ಭೂಮಿ ತಾಯಿಗೆ...
ನಾಚುತ್ತಾ ಮೈಮರೆತು ಮಲಗಿಹಳು ಭೂದೇವಿ ಹಸಿರ ಹೊದ್ದು,
ಆದರೂ ಕಾಡುತಿದೆ ಆಷಾಡದ ವಿರಹವೇದನೆ ಮನಸ್ಸಲ್ಲಿ ಹೊತ್ತು.....
No comments:
Post a Comment