30 July, 2012

ಪಿತಾಮಹ.....



ತಂದೆಯಾಸೆಯ ಪೂರೈಸೆ ಪ್ರತಿಜ್ಞೆಗೈದು ಭೀಷ್ಮನೆನೆಸಿದೆ,
ಇಚ್ಚಾಮರಣದ ವರವ ಪಡೆದ ಪರಾಕ್ರಮಿ ನೀನಲ್ಲವೇ ಗಾಂಗೇಯ...

ವಿಚಿತ್ರವೀರ್ಯಗೆ ಪಟ್ಟವ ಕಟ್ಟಿ ಸ್ವಯಂವರವ ಗೆದ್ದ ಧೀರ ನೀನು,
ಪಂದ್ಯ ಗೆದ್ದ ವೀರ ಹೆಣ್ಣಿನ ಮನಸನರಿಯುವಲ್ಲಿ ಸೋತು ಹೋದೆಯಾ?
ಅಂಬೆಯ ಪ್ರೀತಿಯ ಧಿಕ್ಕರಿಸಿ ಪ್ರತಿಜ್ಞೆಯ ಉಳಿಸಿಕೊಂಡ ಪರಮಯೋಗಿ ನೀನಾದೆ...

ಕುರುವಂಶಕೆ ಹಿರಿಯನಾದೆ,ತಂದೆಯಾದೆ,
ದೃತರಾಷ್ಟ್ರ,ಪಾಂಡು,ವಿಧುರರಿಗೆ ಗುರುವಾದೆ,
ಬೆಳೆಸಿದೆ ಕುರುವಂಶವ ಗುರುವಾಗಿ,ಹಿರಿಯನಾಗಿ,
ಕುರುವಂಶವೇನೊ ಚಿಗುರೊಡೆದಿತ್ತು ಒಂದೆರಡಲ್ಲ,ನೂರೈವರಾಗಿ...

ಪಾಂಡುವನ್ನ ಕಳೆದುಕೊಂಡ ತಬ್ಬಲಿ ಪಾಂಡು ಕುವರರ ಜೊತೆ,
ನೂರೊಂದು ಜನ ದುರುಳರ ಕೌರವ ಪಾಳಯಕ್ಕೆ ಪಿತಾಮಹನಾದೆ,
ಮುಂಬರುವ ಪ್ರಳಯದ ಮುನ್ಸೂಚನೆ ಅಲ್ಲೇ ನಿನಗಾಗಿತ್ತು ಅಲ್ಲವೇ...

ಮೋಸದ ಜೂಜಾಟಕ್ಕೂ ನಿನ್ನದು ದಿವ್ಯ ಮೌನ,
ಧುರ್ಯೊಧನನ ದುರುಳತೆಯ ತಡೆಯಲಾಗದ ಧರ್ಮ ಸಂಕಟ,
ಪಾಂಡವರ ಅರಗಿನ ಮನೆ ಸುಟ್ಟಾಗಲೂ ನೀನು ಎಚ್ಚರಗೊಳ್ಳಲಿಲ್ಲವೇ ಪಿತಾಮಹ...

ನಿನ್ನ ಕಣ್ಣೆದುರೇ ಕುರುಕುಲವು ಕಾಳಗಕ್ಕೆ ನಿಂತಾಗಲೂ ತಡೆಯಲಾಗಲಿಲ್ಲವೇ?
ಕೃಷ್ಣ ಲೀಲೆಗಳ ನೋಡಿ,ಕೇಳಿ ಆನಂದಿಸಿದವನು ನೀನು,ಅವನೇ ಸಂಧಿಗೆ ಬಂದಾಗಲೂ ಕೌರವನ ಅನ್ನದ ಋಣ ನಿನ್ನ ಮೂಕವಾಗಿಸಿತೇ...
ಎಲ್ಲವ ಬಲ್ಲ ವೀರ ನೀನು ಆದರೂ ಕರ್ಣನ ಪರಾಕ್ರಮವ ನಿಂದಿಸಿದೆಯೇನು?
ನೀನು ಧರೆಗುರುಳುವ ಮುನ್ನ ಯುದ್ಧಭೂಮಿಗೆ ಕಾಲಿಡಲಾರೆನೆಂಬ ಕರ್ಣನ ಮಾತು ನಿನ್ನೆದೆಯಾ ಚುಚ್ಚಿರಬೇಕಲ್ಲವೇ...

ಪಾಂಡವರ ವಿಜಯ ದುಂಧುಭಿ ನೋಡಿ ಪಾಂಡವರಲ್ಲೋರ್ವನ ಸಂಹರಿಸುವ ಪ್ರತಿಜ್ಞೆಗೈದೆ ಕುರುಕ್ಷೇತ್ರದಿ,ನೀನೇ ಸಲಹಿದ ಧರ್ಮ ಸಂಜಾತರೆನ್ನುವುದ ಮರೆತೆಯಾ?
ಕಣ್ಣ ಮುಂದೆಯೇ ಅಭಿಮನ್ಯುವ ಮೋಸದಿ ಕೊಂದರು,ಮೌನಿ ಯಾಕಾದೆ ಗಾಂಗೇಯ...

ನಿನ್ನ ಎದುರಿಸಿ ನಿಲ್ಲಬಲ್ಲ ಯೋಧನಿಲ್ಲ ಶಿಖಂಡಿಯ ಮುಂದಿರಿಸಿ ಯುದ್ಧಕ್ಕೆ ಬರ ಹೇಳಿ ನಿನಗೆ ನೀನೇಸೋತೆಯಾ?
ಶಿಖಂಡಿಗೆ ಪ್ರತಿಜ್ಞೆ ಪೂರೈಸಿದ ಸಂತೋಷವಿರಬಹುದು,ನಿನಗೆ ಧರ್ಮವನುಳಿಸಿದ ತೃಪ್ತಿಯೇ...

ಪರಮವೀರ ನೀನು,ಪರಮ ತ್ಯಾಗಿಯಾದೆ,ಕುರುಕುಲವ ಸಾಕಿ ಸಲಹಿದೆ,
ಕೊನೆಗೂ ಮಲಗಿದೆ ಶರಶಯ್ಯೆಯಲ್ಲೇ,ಮೌನದಿಂದಲೇ ಧರ್ಮವನುಳಿಸಿದ ತೃಪ್ತಿ ನಿನಗಿತ್ತೇ ಅಲ್ಲಿ ಪಿತಾಮಹ.....

No comments:

Post a Comment